ಅದೊಂದು ಸೋಮವಾರ. ಜನರಿಂದ ತುಂಬಿ ತುಳುಕುತ್ತಿದ್ದ ಬಸ್ಸೊಂದು ನನ್ನೆದುರು ನಿಂತಿತು. ಇಲ್ಲದ ಜಾಗವನ್ನರಸಿ ಬಸ್ಸು ಹತ್ತಿದೆ. ನೂರೆಂಟು ಆಲೋಚನೆಗಳು ತಲೆಯನ್ನು ಮುತ್ತಿದ್ದವು. ಬಸ್ಸಿನ ನೂಕುನುಗ್ಗಲು, ನಿರ್ವಾಹಕನ ಬಿರುನುಡಿಗಳ ನಡುವೆಯೂ ತನ್ನ ಸುತ್ತಲಿನ ಪರಿವೆಯಿಲ್ಲದೆ ಜೋರಾಗಿ ತನ್ನ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಮಧ್ಯವಯಸ್ಕ, ಅವನ ಸಂಭಾಷಣೆಯ ಸಾರವನ್ನರಿತು ಕಿಸಕ್ಕನೆ ನಗುವ ಕೆಲವು ಶಾಲಾ ಬಾಲಕಿಯರು, ತಮ್ಮ ಮೊಬೈಲಿನೊಳಗೆ ಹೊಸ ಪ್ರಪಂಚವನ್ನೇ ತೆರೆದು ಅಲ್ಲಿ ವ್ಯಸ್ತವಾದ ಯುವ ಮನಸುಗಳು, ಅಲ್ಲೊಂದು ಇಲ್ಲೊಂದು ಕಿಟಕಿಯ ಬಳಿ ಕಿವಿಗೆ ಇಯರ್ ಫೋನ್ ಸಿಕ್ಕಿಸಿ ತಮ್ಮ ನಿದ್ರಾ ಪ್ರಪಂಚದಲ್ಲಿ ಕನಸು ಕಾಣುವ ಹುಡುಗ-ಹುಡುಗಿಯರು, ತಾಯಿಯ ಮಡಿಲಲ್ಲಿ ಬೆಚ್ಚಗೆ ಮಲಗಿದ ಕೆಲ ಮುಗ್ಧ ಪುಟಾಣಿಗಳು, ಅದೆಷ್ಟೋ ಗಾಳಿಸುದ್ದಿಗಳನ್ನು ಸಾರವತ್ತಾಗಿ ವಿವರಿಸುವ ಹೆಂಗಳೆಯರು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಟೀಕೆ ಮಾಡುವ ಹಿರಿಯರು...... ಹೀಗೆ ಒಂದು ಬಸ್ಸಿನಲ್ಲಿ ಹಲವಾರು ಪ್ರಪಂಚಗಳೇ ಕಾಣಸಿಗುವಂತಿತ್ತು. ಹೀಗೆ ಕಣ್ಣಾಡಿಸುತ್ತಾ ಒಂದೂವರೆ ಕಾಲಿನಲ್ಲಿ ನಿಂತು ತೂಕಡಿಸುತ್ತಿದ್ದಾಗ... ಅವಳು ಕಂಡಳು. ಕಿಟಕಿ ಬಳಿ, ಮುಗ್ಧಳಂತೆ ಕಣ್ಣು ಮುಚ್ಚಿ ನಿದ್ರಿಸಿದ್ದಳು. ಅವಳ ಮುಂಗುರುಳುಗಳು ಕೆನ್ನೆಗೆ ಮುತ್ತಿಡುತ್ತಿದ್ದವು. ತೀಡಿದ ಹುಬ್ಬುಗಳು, ಕಪ್ಪು ರೆಪ್ಪೆಗಳು, ನುಣುಪಾದ ಕೆನ್ನೆ.... ನನ್ನ ತೂಕಡಿಕೆ ಹಾರಿಹೋಗಿತ್ತು. ಅಷ್ಟು ಹೊತ್ತು ಹುಡುಗಿಯೊಬ್ಬಳನ್ನು ನೋಡಿದ ನನ್ನ ಬಗ್ಗೆ ನನಗೆ ನಾಚಿಕೆಯಾಯಿತು. ತಲೆ ಕೊಡವಿಕೊಂಡು ನಕ್ಕೆ. #ಅವನ_ಸ್ವಗತ #ಅರೆಘಳಿಗೆ_ಹೊಳೆದ_ಸಾಲುಗಳು #yqjogi #yqkannada #ಕನ್ನಡ_ಪ್ರೀತಿ